ಡಾಲ್ಟನ್ ಶಿಕ್ಷಣ ಪದ್ಧತಿ -
ವೈಯಕ್ತಿಕ ಗಮನಕ್ಕೆ ಪ್ರಾಧಾನ್ಯವಿರುವ ಈ ಶಿಕ್ಷಣ ಪದ್ಧತಿಯನ್ನು ಮಡಾಂ ಮಾಂಟಿಸೋರೀಯವರ ಶಿಷ್ಯೆ ಹೆಲೆನ್ ಪಾರ್ಕ್‍ಹಸ್ರ್ಟ್ ಎಂಬಾಕೆ 1919ರಲ್ಲಿ ಆರಂಭಿಸಿದಳು. ಇದನ್ನು ಅಮೆರಿಕದ ಡಾಲ್ಟನ್ ಎಂಬಲ್ಲಿ ಮೊದಲು ಆರಂಭಿಸಿದ್ದರಿಂದ ಇದಕ್ಕೆ ಡಾಲ್ಟನ್ ಶಿಕ್ಷಣ ಪದ್ಧತಿಯೆಂಬ ಹೆಸರು ಬಂದಿದೆ.

	ಮಾಧ್ಯಮಿಕ ಮತ್ತು ಪ್ರೌಢಶಾಲೆಯ ಅಂತಸ್ತಿನ ಮಕ್ಕಳಿಗಾಗಿ ಆರಂಭಿಸಿದ ಈ ಶಾಲೆಯಲ್ಲಿ ಪ್ರತಿಯೊಂದು ಪಠ್ಯವಿಷಯಕ್ಕೂ ಪ್ರತ್ಯೇಕ ಪ್ರಯೋಗ ಮಂದಿರವುಂಟು. ಆಯಾ ಮಂದಿರದಲ್ಲಿ ಆಯಾ ವಿಷಯದಲ್ಲಿ ಪ್ರವೀಣರಾದ ಶಿಕ್ಷಕರಿರುತ್ತಾರೆ. ಅಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳೂ ಉಪಕರಣಗಳೂ ಚಿತ್ರಪಟಗಳೂ ಇರುವುವು. ಶಿಕ್ಷಕರು ಪ್ರತಿ ಮಗುವಿಗೂ ಪ್ರತ್ಯೇಕ ಗಮನವಿತ್ತು ಆ ವಿಷಯವನ್ನು ಬೋಧಿಸುವರು. ಮಕ್ಕಳು ಅವರವರ ಪ್ರತಿಭೆ. ಆಸಕ್ತಿ, ಅಭಿರುಚಿ, ಅಗತ್ಯ- ಇವಕ್ಕೆ ತಕ್ಕಂತೆ ಸ್ವಂತ ಯತ್ನದಿಂದ ಕಲಿಯುವರು. ಅಗತ್ಯವಾದ ಸಲಹೆ ಸಹಕಾರಗಳನ್ನು ಅಲ್ಲೆ ಇರುವ ಶಿಕ್ಷಕರಿಂದ ಪಡೆದುಕೊಳ್ಳುವರು.

	ಡಾಲ್ಟನ್ ಶಾಲೆಯಲ್ಲಿ ತರಗತಿಗಳಿಲ್ಲ. ವೇಳಾಪಟ್ಟಿಯಿಲ್ಲ. ಅಲ್ಲಿ ವಿದ್ಯಾರ್ಥಿಗಳು ತಮಗೆ ಆಸಕ್ತಿಯಿರುವ ಯಾವ ಭಾಗವನ್ನಾದರೂ ಕಲಿಯಬಹುದು. ಶಿಕ್ಷಕರು ಒಬ್ಬೊಬ್ಬ ವಿದ್ಯಾರ್ಥಿಗೂ ತಕ್ಕ ರೀತಿಯಲ್ಲಿ ಅಭ್ಯಸಿಸಬೇಕಾದ ಭಾಗವನ್ನು ಹಂಚಿಕೆ ಹಾಕಿಕೊಟ್ಟು ಒಂದು ಗೊತ್ತಾದ ಕಾಲದಲ್ಲಿ ಮುಗಿಸುವಂತೆ ಸೂಚಿಸುವರು. ಅದು ಮುಗಿದ ಅನಂತರ ವಿದ್ಯಾರ್ಥಿ ಮುಂದಿನ ಜಾಗಕ್ಕೆ ಹೋಗಬೇಕು. ಆದ್ದರಿಂದ ವಿದ್ಯಾರ್ಥಿಗಳು ಆಸಕ್ತಿಯಿಂದಲೂ ಉತ್ಸಾಹದಿಂದಲೂ ಕಲಿಯುವರು. ಆ ಮಂದಿರದಲ್ಲಿರುವ ಗ್ರಂಥಗಳು ಮತ್ತು ಇತರ ಉಪಕರಣಗಳನ್ನು ಬಳಸಿಕೊಳ್ಳುವರು. ಆ ಕಾರ್ಯದಲ್ಲಿ ಶಿಕ್ಷಕರು ಅಗತ್ಯ ನೆರವನ್ನು ನೀಡಿದರೂ ವಿದ್ಯಾರ್ಥಿಗಳೂ ಬಹುಮಟ್ಟಿಗೆ ಸ್ವಪ್ರಯತ್ನದಿಂದಲೇ ಕಲಿಯುವರು. ಒಂದು ಮಂದಿರದಲ್ಲಿ ಎಲ್ಲ ವಿದ್ಯಾರ್ಥಿಗಳೂ ಒಂದೇ ಪಠ್ಯವಿಷಯವನ್ನು ಅಧ್ಯಯನ ಮಾಡುತ್ತಿದ್ದರೂ ಒಬ್ಬೊಬ್ಬರೂ ಒಂದೊಂದು ಮಟ್ಟದಲ್ಲಿ ಕಲಿಯುತ್ತಿರುತ್ತಾರೆ. ಎಲ್ಲ ವಿಷಯಗಳಲ್ಲೂ ಪ್ರಯೋಗ ನಡೆಸಲು ಅವಕಾಶ ಕಲ್ಪಿಸಿರುವುದರಿಂದ ಇದನ್ನು ಡಾಲ್ಟನ್ ಪ್ರಯೋಗಶಾಲೆ ಎಂದೂ ಕರೆಯುವರು. 

	ಈ ಶಿಕ್ಷಣ ಪದ್ಧತಿ ಯಶಸ್ವಿಯಾಗಬೇಕಾದರೆ ಎಲ್ಲ ವಿಷಯಗಳಲ್ಲೂ ಪರಿಣತರಾದ ಪ್ರತ್ಯೇಕ ಶಿಕ್ಷಕರು ಅಗತ್ಯ; ಅಲ್ಲಿ ಅಗತ್ಯವಾದ ಗ್ರಂಥಗಳೂ ಉಪಕರಣಾದಿಗಳೂ ತಕ್ಕಷ್ಟು ಸಂಖ್ಯೆಯಲ್ಲಿರಬೇಕು. ಶಿಕ್ಷಕರು ನೀಡತಕ್ಕ ಹಂಚಿಕೆ ಪ್ರತಿ ವಿದ್ಯಾರ್ಥಿಗೂ ಅನುಕೂಲಿಸುವಂತಿರಬೇಕು. ಅವರು ಪ್ರತಿ ವಿದ್ಯಾರ್ಥಿಯ ಕಾರ್ಯವನ್ನೂ ಬಹು ಎಚ್ಚರಿಕೆಯಿಂದ ಪರಿಶೀಲಿಸುತ್ತಿರಬೇಕು. ತೀರ ಆತುರದಿಂದ ಸಾಗದಂತೆ, ತೀರ ನಿಧಾನವಾಗಿ ಸಾಗದಂತೆ, ಅಥವಾ ಅಡ್ಡದಾರಿ ಹಿಡಿಯದಂತೆ ನಿರ್ದೇಶಿಸುತ್ತಿರಬೇಕು. ಒಬ್ಬೊಬ್ಬರಿಗೂ ಪ್ರತ್ಯೇಕ ಶಿಕ್ಷಣಾಭಿವೃದ್ಧಿಯ ಪಟ್ಟಿಯನ್ನು ಇಟ್ಟು ನಿರಂತರವೂ ಪರಿಶೀಲಿಸುತ್ತ ಮಾರ್ಗದರ್ಶನ ನೀಡುತ್ತಿರಬೇಕು. ಒಂದು ವಿಷಯದಲ್ಲಿ ತಕ್ಕಷ್ಟು ಶಿಕ್ಷಣ ಪಡೆದ ಅನಂತರ ಇತರ ಪಠ್ಯ ವಿಷಯದ ಅಧ್ಯಯನದ ಕಡೆ ಗಮನವೀಯುವಂತೆ ಮಾಡಬೇಕು.

	ಈ ಪದ್ಧತಿಯಲ್ಲಿ ಪ್ರತಿ ವಿದ್ಯಾರ್ಥಿಯೂ ತನಗೊಪ್ಪುವ ರೀತಿಯಲ್ಲಿ ಕಲಿಯುವ ಅವಕಾಶವಿದೆ. ಇತರರನ್ನು ನೋಡಿ ತಾನೂ ಕಲಿಯಬೇಕೆಂಬ ಬಯಕೆಯೂ ಉತ್ಸಾಹವೂ ಮೂಡುತ್ತವೆ. ಸ್ವತಂತ್ರ ಚಟುವಟಿಕೆಯಿಂದ ಸ್ವಾವಲಂಬನೆಯೂ ಕೈಕೊಂಡ ಕಾರ್ಯವನ್ನು ಮುಗಿಸುವ ಅಭ್ಯಾಸವೂ ಬೆಳೆಯುತ್ತವೆ. ಎಲ್ಲರೂ ತಮ್ಮ ತಮ್ಮ ಕಾರ್ಯದಲ್ಲಿ ಮಗ್ನರಾಗಿರುವುದರಿಂದ ಶಾಲೆಯಲ್ಲಿ ಸ್ವಪ್ರೇರಣೆಯ ಶಿಸ್ತು ನೆಲೆಸಿರುತ್ತದೆ. ಒಂದೇ ಮಂದಿರದಲ್ಲಿ ಎಲ್ಲ ವಯೋಮಾನದ ಮಕ್ಕಳೂ ಇರುವುದರಿಂದ ಒಬ್ಬರೊಡನೊಬ್ಬರು ಸಹಕರಿಸಿ ಕೆಲಸ ಮಾಡುವ ಸಾಮಾಜಿಕ ಅಭ್ಯಾಸವೂ ವರ್ಧಿಸುತ್ತದೆ. ಒಬ್ಬೊಬ್ಬರಿಗೂ ಶಿಕ್ಷಕರು ಪ್ರತ್ಯೇಕ ಗಮನವಿತ್ತು ಅಗತ್ಯ ನಿರ್ದೇಶನ ನೀಡಬಹುದಾದ ಅವಕಾಶವಿರುತ್ತದೆ.

	ಈ ಪದ್ಧತಿಯ ಶಿಕ್ಷಣ ತುಂಬ ದುಬಾರಿ ವೆಚ್ಚದ್ದು. ಶಿಕ್ಷಕರು ಸ್ವಲ್ಪ ಅಜಾಗರೂಕರಾಗಿದ್ದರೆ ಸಾಕು ಮಕ್ಕಳ ಶಿಕ್ಷಣ ಅವ್ಯವಸ್ಥಿತವಾಗಿ ಶಾಲೆಯಲ್ಲಿ ಗೊಂದಲವುಂಟಾಗಬಹುದು. ಈ ಶಿಕ್ಷಣ ವಿಧಾನದಲ್ಲಿ ಸಾಮೂಹಿಕ ಚಟುವಟಿಕೆಗಳಿಗೆ ಅವಕಾಶ ಬಹಳ ಕಡಿಮೆಯಿರುವುದರಿಂದ, ಅನೇಕ ಮಕ್ಕಳು ವ್ಯಾಸಂಗದಲ್ಲಿ ಬಹುಬೇಗ ನಿರುತ್ಸಾಹಿಗಳಾಗಬಹುದು. ಪ್ರತಿಭಾವಂತರು ಹಾಗೂ ಹೀಗೂ ಶಿಕ್ಷಣದಲ್ಲಿ ಪ್ರಗತಿ ಸಾಧಿಸಿದರೂ ಹಿಂದುಳಿದವರು ಹಿಂದೆಯೇ ಉಳಿದುಬಿಡಬಹುದು. ಕೆಲವರು ಒಂದೇ ವಿಷಯದಲ್ಲಿ ಆಸಕ್ತಿ ಬೆಳೆಸಿಕೊಂಡು ಅವರ ಶಿಕ್ಷಣ ಏಕಮುಖವಾಗಬಹುದು. ಇವೆಲ್ಲ ಕಾರಣಗಳಿಂದ ಇದು ಎಲ್ಲೂ ಸಾರ್ವತ್ರಿಕವಾಗಿ ಪ್ರಚಾರಕ್ಕೆ ಬಂದಿಲ್ಲ. ಆದರೆ ಇದರಲ್ಲಿರುವ ಉತ್ತಮಾಂಶಗಳು ಈ ಅರ್ಧ ಶತಮಾನದ ಅವಧಿಯಲ್ಲಿ ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ ಪ್ರಗತಿಯ ಕಡೆ ಮುನ್ನಡೆಯಲು ಸಹಾಯ ಮಾಡಿವೆ.
(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ